ಎಕ್ವಡಾರ್
	ದಕ್ಷಿಣ ಅಮೆರಿಕದ ಒಂದು ಗಣರಾಜ್ಯ. ಈ ಖಂಡದ ಸ್ವತಂತ್ರ ರಾಜ್ಯಗಳ ಪೈಕಿ ಉರುಗ್ವೆಯನ್ನು ಬಿಟ್ಟರೆ ಇದೇ ಅತ್ಯಂತ ಚಿಕ್ಕದು. ಈ ರಾಜ್ಯದ ಉತ್ತರದಲ್ಲಿ ಕೊಲಂಬಿಯವೂ ಪಶ್ಚಿಮದಲ್ಲಿ ಪೆಸಿಫಿಕ್ ಸಾಗರವೂ ದಕ್ಷಿಣ-ಪೂರ್ವಗಳಲ್ಲಿ ಪೆರುವೂ ಇವೆ. ಈ ರಾಜ್ಯದ ಮೇಲೆ ಭೂಮಧ್ಯರೇಖೆ (ಇಕ್ವೇಟರ್) ಹಾದು ಹೋಗುವುದರಿಂದ ಇದಕ್ಕೆ ಈ ಹೆಸರು ಬಂದಿದೆ.

	ಮೇಲ್ಮೈ ಲಕ್ಷಣ: ಆಂಡೀಸ್ ಪರ್ವತ ಶ್ರೇಣಿ ಈ ರಾಜ್ಯದಲ್ಲಿ ಉತ್ತರ ದಕ್ಷಿಣವಾಗಿ ಹಬ್ಬಿರುವುದರಿಂದ ಈ ರಾಜ್ಯದಲ್ಲಿ ತರತಮಗಳು ವಿಪರೀತ. ಇಲ್ಲಿ ಒಂದು ಕಡೆ ಅರೆಮರುಭೂಮಿಯೂ ಇನ್ನೊಂದು ಕಡೆ ಗಂಭೀರ ಕಾನನವೂ ಮತ್ತೊಂದು ಕಡೆ ಸಮುದ್ರದಲ್ಲಿ ಕಾಲ್ತೊಳೆಯುವ ತಗ್ಗುನೆಲವೂ ಮಗುದೊಂದು ಕಡೆ ಅಮೆeóÁನ್ ನದಿಯ ಶಿರೋಭಾಗವೂ ಇವೆ. ಇವುಗಳ ನಡುವೆ ಆಂಡೀಸ್ ಪರ್ವತ ನಿಂತಿದೆ. ಎಕ್ವಡಾರನ್ನು ಮೂರು ಸ್ವಾಭಾವಿಕ ವಿಭಾಗಗಳನ್ನಾಗಿ ವಿಂಗಡಿಸಬಹುದು.

	ಪಶ್ಚಿಮ ಕರಾವಳಿ: ಪೆಸಿಫಿಕ್ ಸಾಗರಕ್ಕೂ ಆಂಡೀಸ್ ಪರ್ವತ ಶ್ರೇಣಿಗೂ ನಡುವೆ ಇರುವ ಈ ಪ್ರದೇಶದ ಅಗಲ 20-115 ಮೈಲಿ. ದೇಶದ ಒಟ್ಟು ವಿಸ್ತೀರ್ಣದಲ್ಲಿ ಇದು ಕಾಲುಭಾಗದ ಪ್ರದೇಶವನ್ನೊಳಗೊಂಡಿದ್ದು 1,500'ಗಳ ಎತ್ತರದಿಂದ, ಸಮುದ್ರಮಟ್ಟದವರೆಗೆ ಇಳಿಜಾರಾಗಿದೆ. ಈ ಭಾಗ ಮೆಕ್ಕಲುಮಣ್ಣಿನಿಂದ ಕೂಡಿದ ಫಲವತ್ತಾದ ಪ್ರದೇಶವಾದ್ದರಿಂದ ವ್ಯವಸಾಯ ಯೋಗ್ಯ ನೆಲ. ಗ್ವಾಯಾಸ್ ಮತ್ತು ಏಸ್ಮರಾಲ್ಡಾಸ್ ಇಲ್ಲಿನ ಮುಖ್ಯನದಿಗಳು.

	ಸಿಯೆರ ಅಥವಾ ಪರ್ವತಪ್ರದೇಶ: ಇದು ದೇಶದ ವಿಸ್ತೀರ್ಣದಲ್ಲಿ ದೇಶದ 1/4 ಭಾಗವನ್ನೊಳಗೊಂಡಿದೆ. ಇಲ್ಲಿ ಹಬ್ಬಿರುವ ಆಂಡೀಸ್ ಪರ್ವತದಿಂದ ದಕ್ಷಿಣೋತ್ತರವಾಗಿ ದೇಶ ಇಬ್ಭಾಗವಾಗಿದೆ. ಆಂಡೀಸ್ ಪರ್ವತಪಂಕ್ತಿಗಳ ಅಗಲ 70-180 ಮೈಲಿ; ಉದ್ದ ಸುಮಾರು 400 ಮೈಲಿ. ಈ ಪರ್ವತ ಪ್ರದೇಶ ದೇಶದ ಜಲ ವಿಭಾಜಕ ಕ್ಷೇತ್ರವಾದ್ದರಿಂದ ನದಿಗಳು ಪೂರ್ವಪಶ್ಚಿಮಾಭಿಮುಖವಾಗಿ ಹರಿಯುತ್ತವೆ. ಇಲ್ಲಿ ಅನೇಕ ಶಿಖರಗಳು 18,000 ಅಡಿಗಳಿಗಿಂತ ಎತ್ತರ. ಇವು ಹಿಮಾಚ್ಛಾದಿತ. ಶಿಖರಗಳು ಪೈಕಿ ಚಿಂಬರಾಸೋ (20,561') ಅತ್ಯುನ್ನತ. ಇದು ಸತ್ತ ಜ್ವಾಲಾಮುಖಿಯೊಂದರ ಟೊಪ್ಪಿಗೆ. ಆಂಡೀಸ್ ಪ್ರದೇಶವೇ ಜಗತ್ತಿನ ಜ್ವಾಲಾಮುಖಿಗಳ ಕ್ರಿಯೆಯ ಒಂದು ಮುಖ್ಯಕೇಂದ್ರ. ಇಲ್ಲಿ ಸುಮಾರು 20 ಜೀವಂತ ಜ್ವಾಲಾಮುಖಿಗಳಿವೆ. ಕೋಟೊಪಾಕ್ಸಿ (19,347') ಪ್ರಪಂಚದ ಅತ್ಯುನ್ನತ ಜೀವಂತ ಅಗ್ನಿಪರ್ವತ. ಆಂಟಿಸಾನ, ಕಾಯಾಂಬೆ ತುಂಗುರಾವ, ಪಿಚೀಂಚ ಇತರ ಅಗ್ನಿಪರ್ವತಗಳು. ಈ ರಾಜ್ಯದಲ್ಲಿ ಭೀಕರ ಭೂಕಂಪಗಳು ಪದೇ ಪದೇ ಸಂಭವಿಸುತ್ತಿರುತ್ತವೆ.

	ಕಾಡು ಪ್ರದೇಶ: ಇದು ದೇಶದ ಪೂರ್ವಭಾಗ. ಸಮುದ್ರ ಮಟ್ಟದಿಂದ 4,000' ಎತ್ತರದಲ್ಲಿದೆ. ಅಮೆeóÁನ್ ನದಿಯ ಉಪನದಿಗಳ ಪಾತ್ರವನ್ನೊಳಗೊಂಡಿರುವ ಈ ಪ್ರದೇಶ ದಟ್ಟವಾದ ಕಾಡುಗಳಿಂದ ಆವೃತ. ದೇಶದ ಒಟ್ಟು ವಿಸ್ತೀರ್ಣದಲ್ಲಿ ಅರ್ಧಭಾಗವನ್ನು ಕ್ರಮಿಸಿಕೊಂಡಿರುವ ಈ ಪ್ರದೇಶ ಬಹಳ ಹಿಂದುಳಿದಿದೆ.

	ವಾಯುಗುಣ, ಸಸ್ಯ, ಜನಜೀವನ ಇತ್ಯಾದಿ : ಈ ದೇಶದ ಮೇಲೆ ಸಮಭಾಜಕ ವೃತ್ತ ಹಾದುಹೋದರೂ ಇಲ್ಲಿ ಒಂದೇ ಮಾದರಿಯ ವಾಯುಗುಣ ಕಂಡುಬರುವುದಿಲ್ಲ. ಇದು ಎತ್ತರಕ್ಕನುಗುಣವಾಗಿ ವ್ಯತ್ಯಾಸವಾಗುತ್ತದೆ. ಪಶ್ಚಿಮತೀರ ಪ್ರದೇಶದಲ್ಲಿ ಉಷ್ಣತೆಯೂ ಮಳೆಯೂ ಹೆಚ್ಚು. ಆದರೆ ಪ್ರಸ್ಥಭೂಮಿ ಹೆಚ್ಚು ತಂಪು ; ಮಳೆ ಸುಮಾರು 50”. ಎತ್ತರವಾದ ಶಿಖರಗಳನ್ನು ಹಿಮ ಕವಿದಿದೆ. ಇಲ್ಲಿನ ಸ್ವಾಭಾವಿಕ ಸಸ್ಯವರ್ಗ ಆಯಾಪ್ರದೇಶದ ಎತ್ತರ ಮತ್ತು ಮಳೆಯ ಪ್ರಮಾಣಕ್ಕನುಗುಣವಾಗಿ ವ್ಯತ್ಯಾಸವಾಗುತ್ತದೆ. ಮಳೆ ಹೆಚ್ಚಾಗಿ ಬೀಳುವ ತೀರಪ್ರದೇಶದಲ್ಲೂ ಪರ್ವತಪ್ರದೇಶದಲ್ಲೂ ಪೂರ್ವದ ಇನ್ನು ಕೆಲವು ಭಾಗಗಳಲ್ಲೂ ದಟ್ಟವಾದ ಕಾಡುಗಳಿವೆ. ಮಳೆ ಕಡಿಮೆ ಬೀಳುವ ಎತ್ತರ ಪ್ರದೇಶಗಳಲ್ಲೂ ಹುಲ್ಲುಗಾವಲುಗಳು ಹರಡಿವೆ. ಈ ದೇಶದ ಒಟ್ಟು ವಿಸ್ತೀರ್ಣದಲ್ಲಿ 74% ಭಾಗ ಬೆಲೆ ಬಾಳುವ ಮರಗಳ ಕಾಡು. ಒಳ್ಳೆಯ ಮಾರ್ಗಗಳಿಲ್ಲದ್ದರಿಂದ ಕಾಡಿನ ಉತ್ಪನ್ನಗಳನ್ನು ಹೆಚ್ಚು ಲಾಭದಾಯಕವಾಗಿ ಉಪಯೋಗಿಸಿಕೊಳ್ಳಲಾಗುತ್ತಿಲ್ಲ. ವ್ಯವಸಾಯ, ಪಶುಪಾಲನೆ ಜನರ ಮುಖ್ಯ ಕಸಬು. ಸೇ.50ರಷ್ಟು ಜನರು ವ್ಯವಸಾಯದಿಂದ ಜೀವಿಸುತ್ತಾರೆ. ಒಟ್ಟು ವಿಸ್ತೀರ್ಣದಲ್ಲಿ ಕೇವಲ 10% ಭಾಗದಲ್ಲಿ ವ್ಯವಸಾಯ ಮಾಡಲಾಗುತ್ತಿದೆ. 5% ಭಾಗದಲ್ಲಿ ದನ ಕುರಿ ಸಾಕುತ್ತಾರೆ. ಈ ದೇಶದ ಮುಖ್ಯ ಬೆಳೆಗಳು ಗೋದಿ, ಬಾರ್ಲಿ, ಕಾಫಿ, ಬತ್ತ, ಬಾಳೆ, ಕೋಕೋ. ತೀರಪ್ರದೇಶದಲ್ಲಿ ಮೀನು ಹಿಡಿಯುವುದು ಮುಖ್ಯ ಕಸಬು.

	ಇಲ್ಲಿನ ಮುಖ್ಯ ಖನಿಜಗಳು ಚಿನ್ನ, ತಾಮ್ರ, ಕಬ್ಬಿಣ, ಜಿಪ್‍ಸಂ, ಗಂಧಕ, ಪೆಟ್ರೋಲ್, ಉಪ್ಪು. ಆದರೆ ಇವನ್ನು ಹೆಚ್ಚಾಗಿ ಉತ್ಪಾದಿಸಲಾಗುತ್ತಿಲ್ಲ. ದೇಶದ ಒಟ್ಟು ರಾಷ್ಟ್ರೀಯ ವರಮಾನದಲ್ಲಿ 2%ರಷ್ಟು ಮಾತ್ರ ಗಣಿಗಳಿಂದ ಬರುತ್ತದೆ. ಈ ದೇಶದ ನದಿಗಳು 9,69,150 ಕಿಲೋ ವಾಟ್ ವಿದ್ಯುಚ್ಫಕ್ತಿ ಉತ್ಪಾದಿಸುವ ಸಾಮಥ್ರ್ಯ ಹೊಂದಿವೆಯಾದರೂ ಕೇವಲ 33,000 ಕೀಲೋ ವಾಟ್‍ನ್ನು ಮಾತ್ರ ಉತ್ಪಾದಿಸಲಾಗುತ್ತಿದೆ. ಇಲ್ಲಿನ ಮುಖ್ಯ ಕೈಗಾರಿಕೆಗಳೆಂದರೆ ಹತ್ತಿಯ ಮತ್ತು ಉಣ್ಣೆಯ ಗಿರಣಿಗಳೂ, ರಬ್ಬರ್, ಕಾಗದ ಮತ್ತು ಚರ್ಮದ ಕಾರ್ಖಾನೆಗಳೂ ಇವೆ. ಒಟ್ಟು ಜನಸಂಖ್ಯೆಯಲ್ಲಿ 23%ರಷ್ಟು ಜನ ಕೈಗಾರಿಕೆಗಳಿಂದ ಜೀವಿಸುತ್ತಾರೆ. ರಾಷ್ಟ್ರೀಯ ವರಮಾನದಲ್ಲಿ 16% ಭಾಗ ಕೈಗಾರಿಕೆಯದು. ಇಲ್ಲಿಂದ ರಫ್ತಾಗುವ ವಸ್ತುಗಳು ಮುಖ್ಯವಾಗಿ ಬಾಳೆ, ಕಾಫಿ, ಕೋಕೋ ಮತ್ತು ಇತರ ವ್ಯವಸಾಯೋತ್ಪನ್ನಗಳು. ಯಂತ್ರೋಪಕರಣ, ವಾಹನ, ಔಷಧಿ, ಗೋದಿ ಮುಂತಾದವು ಮುಖ್ಯ ಆಮದು ವಸ್ತುಗಳು.

	ಎಕ್ವಡಾರಿನ ಜನಸಂಖ್ಯೆ 44,76,007. ಇವರಲ್ಲಿ 29% ಜನ ಪಟ್ಟಣಗಳಲ್ಲಿ ವಾಸ ಮಾಡುತ್ತಾರೆ. 41% ಮಂದಿ ಮೆಸ್ಟೀಜೋಗಳು (ಐರೋಪ್ಯ ಹಾಗೂ ಬಣ್ಣದ ಜನಗಳ ಬೆರಿಕೆ), 39% ಮಂದಿ ಇಂಡಿಯನ್ನರು, 10% ಬಿಳಿಯರು, 5% ನೀಗ್ರೋಗಳು. ನೂರರಲ್ಲಿ ತೊಂಬತ್ನಾಲ್ಕು ಮಂದಿ ರೋಮನ್ ಕೆಥೊಲಿಕರು. ಸ್ಪ್ಯಾನಿಷ್ ಇಲ್ಲಿನ ಸರ್ಕಾರಿ ಭಾಷೆ. ಸೇ. 93 ಜನ ಈ ಭಾಷೆ ಆಡುತ್ತಾರೆ.

	ಈ ದೇಶದಲ್ಲಿ ಸುಮಾರು 700 ಮೈಲಿಗಳ ಕಿರು ಅಂತರ (ನ್ಯಾರೋ ಗೇಜ್) ರೈಲುಮಾರ್ಗಗಳಿವೆ. ಗ್ವಾಯಾಕೀಲ್-ಕೀಟೊ ಮಾರ್ಗ ಮುಖ್ಯವಾದ್ದು ಇಲ್ಲಿನ ರೈಲ್ವೆಯನ್ನು 1944ರಲ್ಲಿ ರಾಷ್ಟ್ರೀಕರಣಗೊಳಿಸಲಾಯಿತು. ಇಲ್ಲಿ ಸುಮಾರು 8,000 ಮೈಲಿಗಳ ರಸ್ತೆಗಳಿವೆ. ಪ್ಯಾನ್-ಅಮೆರಿಕನ್ ಹೆದ್ದಾರಿ ಮುಖ್ಯವಾದ್ದು. ಇದು ಕೊಲಂಬಿಯದಿಂದ ಪೆರುವಿಗೆ ಈ ದೇಶದ ಮೂಲಕ ಹಾದುಹೋಗುತ್ತದೆ.

	ಎಕ್ವಡಾರಿನ ರಾಜಧಾನಿ ಕೀಟೊ. ಇದು ಸುಮಾರು 9,000 ಅಡಿಗಳ ಎತ್ತರದಲ್ಲಿ, ಹೆಚ್ಚು ಕಡಿಮೆ ಭೂಮಧ್ಯರೇಖೆಯ ಮೇಲೆ ಇದೆ. ಜನಸಂಖ್ಯೆ - 1,65,900. ಗ್ವಾಯಾಕೀಲ್ ಮುಖ್ಯ ವ್ಯಾಪಾರ ಮತ್ತು ಕೈಗಾರಿಕಾಕೇಂದ್ರ ; ಅಲ್ಲದೆ ದೇಶದ ದೊಡ್ಡ ರೇವುಪಟ್ಟಣ. ಜನಸಂಖ್ಯೆ 1,72,000 ಕ್ವೇಂಗ್ಕಾ, ಮಾಂಟಾ, ಪ್ವೆರ್ಟೊ ಬೊಲೀವಾರ್ ಇತರ ಪಟ್ಟಣಗಳು.
(ಎಸ್.ಎನ್.ಎ.ಆರ್.)

ಇತಿಹಾಸ :	ಎಕ್ವಡಾರ್ ನೆಲವನ್ನು ಐರೋಪ್ಯರು ಮೊಟ್ಟಮೊದಲು ಕಂಡದ್ದು 1526ರಲ್ಲಿ. ಆ ವರ್ಷದಲ್ಲಿ ಕೆಲವರು ಸ್ಪೇನಿಗರು ಪನಾಮ ಭೂಕಂಠದ ಬಳಿಯಿಂದ ಹಡಗಿನಲ್ಲಿ ಕುಳಿತು ಭೂಮಧ್ಯರೇಖೆಯ ದಕ್ಷಿಣಕ್ಕೆ ಪಶ್ಚಿಮತೀರದ ಗುಂಟ ಸಾಗಿ ಎಕ್ವಡಾರಿನಲ್ಲಿ ಕಾಲಿಟ್ಟರು. ಆಗ ಇಲ್ಲಿ ಅಧಿಕ ಸಂಖ್ಯೆಯಲ್ಲಿದ್ದ ಇಂಡಿಯನ್ನರು ಇವರನ್ನು ಸ್ನೇಹದಿಂದ ಸ್ವಾಗತಿಸಿದರು. ಆಗಲೇ ಎಕ್ವಡಾರಿನ ಆಧುನಿಕ ಇತಿಹಾಸ ಆರಂಭವಾದದ್ದು.

	ಅದಕ್ಕೂ ಹಿಂದೆ ಇಲ್ಲಿ ಅನೇಕ ಆದಿವಾಸಿಗಳು ವಾಸಿಸುತ್ತಿದ್ದು ತಮ್ಮ ಸಂಸ್ಕøತಿಗಳನ್ನು ಬೆಳೆಸಿಕೊಂಡಿದ್ದರು. ಇಲ್ಲಿನ ಎತ್ತರ ಪ್ರದೇಶದಲ್ಲಿ ಪಾಸ್ಟಲ್, ಕಾರಾಸ್, ಪಾನ್‍ಜಾóಲಿಯೊಸ್, ಪುರುಹಾಸ್, ಕಾನಾರಿಸಿ, ಪಾಲ್ಟಾಸ್‍ಗಳೆಂಬ ಆರು ಭಾಷಾ ಗುಂಪುಗಳ ಜನರಿದ್ದರು. ಈ ಭಾಷೆಗಳು ಈಗ ಇಲ್ಲ. ಆಗಲೂ ಒಂದು ಗುಂಪಿನ ಭಾಷೆ ಇನ್ನೊಂದು ಗುಂಪಿನವರಿಗೆ ಅರ್ಥವಾಗುತ್ತಿರಲಿಲ್ಲ. ಇವರ ನಂಬಿಕೆಗಳೂ ಪದ್ಧತಿಗಳೂ ಪರಸ್ಪರ ಭಿನ್ನವಾಗಿದ್ದುವು. ಇವರೆಲ್ಲರೂ ಸ್ಥೂಲವಾಗಿ ಆಂಡೀಸ್ ಪ್ರದೇಶದ ಸಂಸ್ಕøತಿಯವರು. ಬೇಸಾಯ ಇವರ ಕಸುಬು. ಪಶುಪಾಲನೆಯನ್ನೂ ನಡೆಸುತ್ತಿದ್ದರು. ಚಿನ್ನ, ಬೆಳ್ಳಿ ಕೆಲಸ, ಮಡಕೆಯ ತಯಾರಿಕೆ ಇವು ಇವರಿಗೆ ಗೊತ್ತಿದ್ದುವು.

	ಪಶ್ಚಿಮತೀರದ ಹಾಗೂ ಪೂರ್ವ ನಾಡಿನ ಜನ ಇನ್ನೂ ಹಿಂದಿನವರು. ತೀರ ವಾಸಿಗಳಿಗೆ ಮೀನುಗಾರಿಕೆ, ಬೇಟೆಗಾರಿಕೆ ಮುಖ್ಯ ಉದ್ಯಮ. ಮೇಲ್ನಾಡುಗಳ ಬಟ್ಟೆ ಚಿನ್ನ ಬೆಳ್ಳಿಗಳಿಗೆ ಇವರು ಇವನ್ನು ಮಾರುತ್ತಿದ್ದರು. ತೀರದ್ವೀಪಗಳು ಇವರ ದೃಷ್ಟಿಯಲ್ಲಿ ಪವಿತ್ರ. ತಮ್ಮ ನಾಯಕರು ಸತ್ತರೆ ಅವರ ಸಮಾಧಿಗೆ ಈ ದ್ವೀಪಗಳು ಮೀಸಲಾಗಿದ್ದುವು. ತೀರಪ್ರದೇಶದ ಮೂಲವಾಸಿಗಳು ಕ್ರಮೇಣ ಕಣ್ಮರೆಯಾದರು. ಅಳಿದುಳಿದವರು ನೀಗ್ರೊಗಳೊಂದಿಗೂ ಇತರರೊಂದಿಗೂ ಬೆರೆತುಹೋದರು. ಪೂರ್ವದ ಜನ ತಮ್ಮ ಪ್ರತ್ಯೇಕತೆಯ ಕಾರಣದಿಂದ ತಮ್ಮತನವನ್ನು ಉಳಿಸಿಕೊಂಡರು.

	15ನೆಯ ಶತಮಾನದ ಆದಿಕಾಲದಲ್ಲಿ ಕಾರಾಸರು ಉತ್ತರದವರ ಮೇಲೆ ಆಕ್ರಮಣ ನಡೆಸಿ ಅವರ ನೆಲ ಗೆದ್ದರು. ಮುಂದೆ ಇದು ದಕ್ಷಿಣದ ಕಡೆಯೂ ವಿಸ್ತರಿಸಿತು. ಈ ರಾಜ್ಯ ಮುಂದೆ ಇಂಕ ಸಾಮ್ರಾಜ್ಯಕ್ಕೆ ಮಣಿದು ಅದರ ಭಾಗವಾಯಿತು. ಈ ಸಾಮ್ರಾಜ್ಯಕ್ಕೆ ಎಲ್ಲೆಲ್ಲಿ ಪ್ರತಿಭಟನೆಯಿತ್ತೊ ಅಲ್ಲಿನ ಜನರೆಲ್ಲ ಉಚ್ಛಾಟನೆಗೊಳಗಾದರು. ಈ ಸಾಮ್ರಾಜ್ಯದ ಕಾಲದಲ್ಲಿ ಎಕ್ವಡಾರಿನ ಜನಜೀವನ ತಕ್ಕಮಟ್ಟಿಗೆ ಬದಲಾಯಿತು. ಮುಂದೆ ಇಂಕಕ್ಕೂ ಕೊನೆಗಾಲ ತಪ್ಪಲಿಲ್ಲ. ಆಗಲೇ ಸ್ಪೇನಿಗರು ಇಲ್ಲಿಗೆ ಬಂದದ್ದು. 

	16ನೆಯ ಶತಮಾನದ ಪೂರ್ವಾರ್ಧದಲ್ಲಿ ಇವರು ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಬಂದು ಕ್ರಮಕ್ರಮವಾಗಿ ಇಂಕದ ಬಲ ಕುಂದಿಸಿದರು. ಮೊದಮೊದಲು ಇಲ್ಲಿನ ಚಿನ್ನ ಬೆಳ್ಳಿಗಳಲ್ಲಿ ಆಸಕ್ತರಾಗಿದ್ದ ಸ್ಪೇನಿಗರು ಮುಂದೆ ಇಲ್ಲಿ ನೆಲಸಿ ಬೇಸಾಯದಲ್ಲೂ ಆಸಕ್ತಿ ತಳೆದರು. ಈ ಶತಮಾನದ ಅಂತ್ಯಕಾಲದ ವೇಳೆಗೆ ನಾಲ್ಕಾರು ನಗರಗಳು ಬೆಳೆದವು. ಇವುಗಳಲ್ಲಿ ಕೀಟೋ ಒಂದು.

	ವಲಸೆಗಾರರಿಗೂ ಸ್ಪೇನಿನ ಆಡಳಿತಗಾರರಿಗೂ ನಡುವೆ ಕ್ರಮೇಣ ವಿರಸಗಳು ಬೆಳೆದವು. ಸ್ಪೇನಿನಿಂದ ಪ್ರತ್ಯೇಕವಾಗಿ ಸ್ವತಂತ್ರವಾಗಬೇಕೆಂಬ ಇವರ ಧ್ವನಿ ಮೊಟ್ಟಮೊದಲು ಕೇಳಿಸಿದ್ದು 1809ರ ಆಗಸ್ಟ್ 10ರಂದು, ಕೀಟೋದಲ್ಲಿ, ಪ್ರಾರಂಭದಲ್ಲಿ ಸ್ಪೇನ್ ಆಡಳಿತಗಾರರು ಇದನ್ನು ನಿರ್ದಯೆಯಿಂದ ದಮನ ಮಾಡಿದರೂ ಕ್ರಮೇಣ ಇದು ಉಗ್ರವಾಯಿತು. ಪೆರು ಕೊಲಂಬಿಯಗಳಿಂದ ಸೈನ್ಯಗಳು ಇಲ್ಲಿಗೆ ನುಗ್ಗಿ ಇದನ್ನು ಹತೋಟಿಗೊಳಪಡಿಸಲು ಯತ್ನಿಸಿದವು.

	1830ರಲ್ಲಿ ಇದು ಕೊಲಂಬಿಯದಿಂದ ಪ್ರತ್ಯೇಕಗೊಂಡಾಗಲೇ ಸ್ವತಂತ್ರ ಎಕ್ವಡಾರಿನ ಇತಿಹಾಸ ಆರಂಭ. ಆಗ ರಾಷ್ಟ್ರಕ್ಕೊಂದು ಸಂವಿಧಾನ ಬಂತು. ಜನರಲ್ ಹ್ವಾನ್ ಜೋಸ್ ಫ್ಲೋರೆಸ್ ಪ್ರಥಮ ಅಧ್ಯಕ್ಷನಾಗಿ ಚುನಾಯಿತನಾದ. 

	ಫ್ಲೋರೆಸ್ ಎಕ್ವಡಾರಿನ ಪ್ರಜೆಯಾಗಿರಲಿಲ್ಲ. ಆತ ವೆನಿeóïವೀಲದವ. ಅಧ್ಯಕ್ಷನಾಗಿರುವವನು ತನ್ನ ಅಧ್ಯಕ್ಷಾವಧಿಯ ಮುಂದಿನ ಅವಧಿಯಲ್ಲೂ ಅಧ್ಯಕ್ಷನಾಗಿರಬಾರದೆಂಬ ಸಂವಿಧಾನ ನಿಯಮವನ್ನೇ ಇವನು ಬದಲಾಯಿಸಿ ಅಧಿಕಾರದಲ್ಲಿದ್ದ. ಇದರಿಂದ ದೇಶದಲ್ಲಿ ಕ್ರಾಂತಿಯುಂಟಾಗಿ ಕೊನೆಗೆ ಈತ ಪದಚ್ಯುತನಾಗಿ ದೇಶಭ್ರಷ್ಠನಾದ.

	ಅಲ್ಲಿಂದ ಮುಂದಿನ 15 ವರ್ಷಗಳು ಬಲು ಅಸ್ಥಿರತೆಯ ಕಾಲ. ಆ ಕಾಲದಲ್ಲಿ ಐವರು ಅಧ್ಯಕ್ಷರು ಬಂದು ಹೋದರು. ಪೆರು, ಕೊಲಂಬಿಯಗಳೊಳಗೆ ಯುದ್ಧ ಸಂಭವಿಸಿತು. ಕೊನೆಗೆ (1861ರಲ್ಲಿ) ಗೇಬ್ರಿಯಲ್ ಗಾರ್ಕೀಯ ಅಧ್ಯಕ್ಷನಾದ. ಈತ 15 ವರ್ಷ ಅಧಿಕಾರದಲ್ಲಿದ್ದ. ದೇಶದ ಅಭಿವೃದ್ಧಿಗೆ ಈತ ಬಹಳಮಟ್ಟಿಗೆ ಶ್ರಮಿಸಿದ. ಕೆಥೊಲಿಕ್ ಧರ್ಮದ ತಳಹದಿಯ ಮೇಲೆ ದೇಶವನ್ನು ಒಗ್ಗೂಡಿಸಿದ ಈತ 1875ರಲ್ಲಿ ಕೊಲೆಗೀಡಾದ.

	ಮುಂದಿನ ಇಪ್ಪತ್ತು ವರ್ಷ ಮತ್ತೆ ಡೋಲಾಯಮಾನ ಪರಿಸ್ಥಿತಿಯಿತ್ತು. 1897ರಲ್ಲಿ ಅಲ್ಬಾರೊ ಅಧ್ಯಕ್ಷನಾದ ಮೇಲೆ ದೇಶದಲ್ಲಿ ಉದಾರವಾದದ ಚಳವಳಿ ಪ್ರಬಲವಾಯಿತು. ಸರ್ಕಾರಕ್ಕೂ ಕೆಥೊಲಿಕ್ ಮತಕ್ಕೂ ಇದ್ದ ಸಂಬಂಧವನ್ನು ಬೇರ್ಪಡಿಸಿ ಲೌಕಿಕ ರಾಜ್ಯದ ತಳಹದಿ ಹಾಕಿದ್ದು ಈತನ ಸಾಧನೆ. ಈತನೂ ಕೊಲೆಗೀಡಾದ.

	ಮುಂದೆಯೂ ಎಕ್ವಡಾರಿನ ಇತಿಹಾಸ ಸುಸೂತ್ರವಾಗಿ ನಡೆಯಲಿಲ್ಲ. ಆ ವೇಳೆಗೆ ಕರಾವಳಿಯ ಆರ್ಥಿಕ ಪ್ರಾಬಲ್ಯ ಹೆಚ್ಚಿ ರಾಜಕೀಯದಲ್ಲೂ ಅಲ್ಲಿನವರ ಪ್ರಭಾವ ಬೆಳೆಯಿತು. ಆದರೂ ಸರ್ಕಾರ ಮಾತ್ರ ಉದ್ದಕ್ಕೂ ಅಭದ್ರವಾಗಿಯೇ ಸಾಗಿತ್ತು. ಎಕ್ವಡಾರಿನಲ್ಲಿ ಅಲ್ಲಿಂದೀಚೆಗೆ ಅನೇಕ ಬಾರಿ ಕ್ಷಿಪ್ರಕ್ರಾಂತಿಗಳು ಸಂಭವಿಸಿವೆ. ಒಬ್ಬರಾದ ಮೇಲೆ ಒಬ್ಬರಂತೆ ಸೇನಾಧಿಕಾರಿಗಳು ಆಡಳಿತಸೂತ್ರ ವಹಿಸಿಕೊಂಡಿದ್ದಾರೆ. ಅಲ್ಲಿನ ಭೂಕಂಪಗಳಂತೆ ಆಡಳಿತದಲ್ಲೂ ಕಂಪನಗಳು ಸಾಮಾನ್ಯ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ